
ಬಾಲ್ಯ ವಿವಾಹದ ತೀವ್ರ ಪರಿಣಾಮ – 18 ವರ್ಷದೊಳಗಿನ 55 ಬಾಲ ಗರ್ಭಿಣಿಯರು ಪತ್ತೆ!
News Details
ಕಳೆದ ಮೂರು ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 18 ವರ್ಷದೊಳಗಿನ ಗರ್ಭಿಣಿಯರ ಸಂಖ್ಯೆ ಹೆಚ್ಚಳವಾಗಿದೆ. ಈ ಅವಧಿಯಲ್ಲಿ 55 ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ.
ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಪ್ರೇಮ ಪ್ರಕರಣಗಳು ಅಪ್ರಾಪ್ತ ಗರ್ಭಿಣಿ ಸಂಖ್ಯೆಯರ ಹೆಚ್ಚಳಕ್ಕೆ ಕಾರಣವಾಗಿದೆ. ಈ ಬಗ್ಗೆ ಬಾಲಕಿಯರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಮಕ್ಕಳ ಹಕ್ಕು ರಕ್ಷಣಾ ಸಮಿತಿ ಶ್ರಮಿಸುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಜಾಗೃತಿ, ಆಪ್ತ ಸಮಾಲೋಚನೆ, ಪೊಲೀಸರ ಮೂಲಕ ಅರಿವು ಸೇರಿ ಅನೇಕ ಬಗೆಯ ಕಾರ್ಯಾಗಾರಗಳು ನಡೆಯುತ್ತಿದೆ. ಅದಾಗಿಯೂ, ಹದಿಹರಿಯದ ಮನಸ್ಸುಗಳಲ್ಲಿನ ಚಂಚಲತೆ ಪ್ರೀತಿ-ಪ್ರೇಮ ವಿಷಯವಾಗಿ ಹೆಚ್ಚು ಆಸಕ್ತಿಹೊಂದಿದ್ದು, ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ.
ಪಾಲಕರು ನೀಡಿದ ದೂರು, ಅಂಗನವಾಡಿ ಕಾರ್ಯಕರ್ತೆಯರು ನೀಡಿದ ಮಾಹಿತಿ ಹಾಗೂ ಇನ್ನಿತರ ಆಧಾರದಲ್ಲಿ ಬಾಲ ಗರ್ಭಿಣಿಯರ ಪ್ರಕರಣವನ್ನು ಮಕ್ಕಳ ರಕ್ಷಣಾ ಘಟಕ ಪತ್ತೆ ಮಾಡುತ್ತಿದೆ. ಉತ್ತರ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಕಳೆದ ಮೂರು ವರ್ಷದ ಅವಧಿಯಲ್ಲಿ 55 ಬಾಲ ಗರ್ಭಿಣಿಯರು ಕಾಣಿಸಿಕೊಂಡಿದ್ದಾರೆ. ಮಕ್ಕಳ ರಕ್ಷಣಾ ಘಟಕಕ್ಕೆ ಜಿಲ್ಲಾಕೇಂದ್ರ ಕಾರವಾರದಲ್ಲಿ ಮುಖ್ಯ ಕಚೇರಿಯಿದ್ದು, ಇಲ್ಲಿಯೇ ಹೆಚ್ಚಿನ ಪ್ರಕರಣಗಳು ವರದಿಯಾಗಿದೆ. ಕಾರವಾರದಲ್ಲಿ 10 ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿಯಿದೆ.
`ಲೈಂಗಿಕ ಕಿರುಕುಳ, ದೌರ್ಜನ್ಯದ ವಿರುದ್ಧ ಅನೇಕ ಇಲಾಖೆಗಳು ಸಮರ ಸಾರುತ್ತಿವೆ. ಶಾಲಾ-ಕಾಲೇಜುಗಳಲ್ಲಿ ಸಹ ಈ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆದಿದೆ. ಸಮಸ್ಯೆ ಸಾಧ್ಯತೆಯಿದ್ದರೆ ಮಕ್ಕಳ ದೂರು ಸಹಾಯವಾಣಿ 1098ಗೆ ಫೋನ್ ಮಾಡುವಂತೆಯೂ ಎಲ್ಲಡೆ ಸೂಚಿಸಲಾಗುತ್ತದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು. `20 ವರ್ಷಕ್ಕಿಂತ ಮುಂಚೆ ಗರ್ಭಕೋಶ ಹಾಗೂ ಪ್ರಸವದ ದಾರಿ ಬೆಳವಣಿಗೆ ಸರಿಯಾಗಿ ಇರುವುದಿಲ್ಲ. ಅಪ್ರಾಪ್ತರು ಗರ್ಭಿಣಿಯಾದರೆ ಅವರ ಆರೋಗ್ಯದ ಮೇಲೆಯೂ ಅಡ್ಡಪರಿಣಾಮ ಖಚಿತ' ಎಂಬುದು ವೈದ್ಯರ ಮಾತು.
ಅಪ್ರಾಪ್ತ ಗರ್ಭಿಣಿ ಪ್ರಕರಣ ತಡೆಗೆ ಜನ ಜಾಗೃತಿ ಹಾಗೂ ಮುನ್ನಚ್ಚರಿಕೆ ಮಾತ್ರ ದಾರಿ. ಮಕ್ಕಳ ಆರೈಕೆ ಹಾಗೂ ಕಾಳಜಿವಿಷಯದಲ್ಲಿ ಪಾಲಕರು ಮುತುವರ್ಜಿವಹಿಸುವುದು ಸೂಕ್ತ.