
ಮನೆ ಸಮಸ್ಯೆಗೆ ಸಚಿವ ಮಂಕಾಳು ವೈದ್ಯರಿಂದ ಭರವಸೆ
News Details
ಶಿರಸಿಯಿಂದ ಭಟ್ಕಳಕ್ಕೆ ಬಂದಿದ್ದ ವೃದ್ಧರೊಬ್ಬರು ಸಚಿವ ಮಂಕಾಳು ವೈದ್ಯರನ್ನು ಭೇಟಿ ಮಾಡಿ `ಮನೆ ಸಮಸ್ಯೆ' ಬಗ್ಗೆ ಅಳಲು ತೋಡಿಕೊಂಡರು. ಈ ವೇಳೆ ಸ್ವಂತ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಮಂಕಾಳು ವೈದ್ಯ ಭರವಸೆ ನೀಡಿದರು.
`ಶಿರಸಿ ತಾಲೂಕಿನ ಹಿಟ್ಕುಳಿ ಗ್ರಾಮದ ಅರಣ್ಯ ಇಲಾಖೆ ಜಾಗದಲ್ಲಿ ನಾನು ಗುಡಿಸಲು ನಿರ್ಮಿಸಿಕೊಂಡಿದ್ದೇನೆ. ಪತ್ನಿ ಜೊತೆ ವಾಸವಿರುವ ಆ ಗುಡಿಸಲನ್ನು ಅರಣ್ಯ ಇಲಾಖೆಯವರು ನೆಲಸಮ ಮಾಡಿದ್ದಾರೆ' ವೃದ್ಧರೊಬ್ಬರು ಅಸಹಾಯಕತೆ ತೋಡಿಕೊಂಡರು. ಅವರ ಅಹವಾಲು ಆಲಿಸಿದ ಸಚಿವ ಮಂಕಾಳು ವೈದ್ಯ `ಅಲ್ಲಿಯೇ ನಿವೇಶನ ಲಭ್ಯವಿದ್ದರೆ ಸ್ವಂತ ಮೊತ್ತದಲ್ಲಿ ಮನೆ ನಿರ್ಮಿಸಿ ಕೊಡುವೆ' ಎಂದು ಹೇಳುವ ಮೂಲಕ ತಮ್ಮನ್ನು ನೋಡಲು ದೂರದಿಂದ ಬಂದಿದ್ದ ವೃದ್ಧರಿಗೆ ಸಮಾಧಾನ ಮಾಡಿದರು.
ಶನಿವಾರ ಭಟ್ಕಳದ ನ್ಯೂ ಇಂಗ್ಲಿಷ್ ಸ್ಕೂಲ್‌ನ ಕಮಲಾವತಿ ಶ್ಯಾನಭೋಗ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸಚಿವ ಮಂಕಾಳು ವೈದ್ಯ ಮಾತನಾಡಿ `ಜನ ಸಾಮಾನ್ಯರು ತಮ್ಮ ಸಮಸ್ಯೆಗಳ ಬಗ್ಗೆ ಪದೇ ಪದೇ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತೆ ಮಾಡಬೇಡಿ. ಅವರ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಒದಗಿಸಿ' ಅಧಿಕಾರಿಗಳಿಗೆ ಸೂಚಿಸಿದರು. ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿಯೂ ಎಚ್ಚರಿಸಿದರು.
104 ಅರ್ಜಿಗಳು ಈ ವೇಳೆ ಸಲ್ಲಿಕೆಯಾದವು. ಭಟ್ಕಳ ಆಸ್ಪತ್ರೆಯ ಅವ್ಯವಸ್ಥೆ, ಎಂಡೋಸಲ್ಫಾನ್ ಪೀಡಿತರ ಸಮಸ್ಯೆ, ಅವ್ಯವಸ್ಥೆಯ ಹೆದ್ದಾರಿ ಕಾಮಗಾರಿ, ಪಹಣಿ ಪತ್ರ, ಪೋಡಿ, ರಸ್ತೆ ನಿರ್ಮಾಣ, ಬೀದಿ ದೀಪ, ಒಳಚರಂಡಿ, ವಿದ್ಯುತ್ ಹಾಗೂ ಪಿಂಚಣಿ ಕುರಿತ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. ಉದ್ಯೋಗ ನೇಮಕಾತಿ ಕುರಿತ ಮನವಿಗಳಿಗೂ ನೆರವು ನೀಡುವುದಾಗಿ ಸಚಿವ ಮಂಕಾಳು ವೈದ್ಯ ಘೋಷಿಸಿದರು.