
ಜಾತ್ರೆ ಅವ್ಯವಹಾರ: ಪೆನ್ ಡ್ರೈವ್‌ಗಳು ಕಾಣೆ!
News Details
ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಾತ್ರೆ ಅವಧಿಯಲ್ಲಿ 11 ಲಕ್ಷ ರೂ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಭೀತಾಗಿದ್ದು, ಇದಕ್ಕಿಂತ ಹೆಚ್ಚಿನ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಸದಸ್ಯರು ದೂರಿದ್ದಾರೆ. ಪ್ರಕರಣದ ಪತ್ತೆಗೆ ಮುಖ್ಯ ಸಾಕ್ಷಿಯಾಗಿದ್ದ ಮೂರು ಪೆನ್ ಡ್ರೈವ್ ಇದೀಗ ಕಾಣೆಯಾಗಿದೆ!
ಯಲ್ಲಾಪುರದ ಜಾತ್ರೆ ಅವಧಿಯಲ್ಲಿ ವಿವಿಧ ಪ್ರದೇಶಗಳನ್ನು ಹರಾಜು ಹಾಕಲಾಗಿತ್ತು. ಹರಾಜು ಹಾಕಿದ ಸ್ಥಳದಲ್ಲಿ ವ್ಯಾಪಾರಸ್ಥರು ಅಂಗಡಿ ಹಾಕಿಕೊಂಡು ವ್ಯವಹಾರ ನಡೆಸಿದ್ದರು. ವ್ಯಾಪಾರಿಗಳು ಪಟ್ಟಣ ಪಂಚಾಯತಗೆ ನೀಡಿದ ಹಣದಲ್ಲಿ ಅಪರಾತಪರ ನಡೆದಿದ್ದು, ಅವೆಲ್ಲವೂ ಸರ್ಕಾರಿ ಖಜಾನೆ ಸೇರಿರಲಿಲ್ಲ. ಹರಾಜು ಕೂಗಿದ ಮೊತ್ತ ಹಾಗೂ ಖಜಾನೆಗೆ ಸೇರಿದ ಮೊತ್ತದ ನಡುವೆ ವ್ಯತ್ಯಾಸ ಕಂಡು ಬಂದಿದನ್ನು ಪ ಪಂ ಸದಸ್ಯರೇ ಕಂಡು ಹಿಡಿದಿದ್ದರು. ಹರಾಜು ನಡೆದ ದಿನ 17 ಸಾವಿರ ರೂ ವೆಚ್ಚ ಮಾಡಿ ಪ ಪಂ ವಿಡಿಯೋ ಚಿತ್ರಿಕರಣವನ್ನು ನಡೆಸಿದ್ದು, ಸ್ಟೂಡಿಯೋದವರು ಮೂರು ಪೆನ್ ಡ್ರೈವ್ ಮೂಲಕ ಆ ವಿಡಿಯೋವನ್ನು ಪಟ್ಟಣ ಪಂಚಾಯತಗೆ ಹಸ್ತಾಂತರಿಸಿದ್ದರು. ಆದರೆ, ಇದೀಗ ಆ ಪೆನ್ ಡ್ರೈವ್ ಎಲ್ಲಿ ಹೋಯಿತು? ಎಂದು ಯಾರಿಗೂ ಗೊತ್ತಿಲ್ಲ!
ಶುಕ್ರವಾರ ಯಲ್ಲಾಪುರದಲ್ಲಿ ನಡೆದ ಪ ಪಂ ಸಾಮಾನ್ಯ ಸಭೆಯಲ್ಲಿ ಪೆನ್ ಡ್ರೈವ್ ವಿಷಯವಾಗಿ ಚರ್ಚೆ ನಡೆಯಿತು. `ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಅವರಿಗೆ ಆ ಪೆನ್ ಡ್ರೈವ್ ನೀಡಿದ್ದೇನೆ' ಎಂದು ಪ ಪಂ ಸಿಬ್ಬಂದಿ ನಾಗರತ್ನ ನಾಯ್ಕ ಹೇಳಿದರು. `ನನಗೆ ಯಾವುದೇ ಪೆನ್ ಡ್ರೈವ್ ನೀಡಿಲ್ಲ' ಎಂದು ಸೋಮೇಶ್ವರ ನಾಯ್ಕ ಸಮಜಾಯಿಶೀ ನೀಡಿದರು. `ಒಂದು ಪೆನ್ ಡ್ರೈವ್ ಸೋಮೇಶ್ವರ ನಾಯ್ಕ ಅವರಿಗೆ ನೀಡಿದರೆ, ಉಳಿದ ಎರಡು ಪೆನ್ ಡ್ರೈವ್ ಎಲ್ಲಿ?' ಎಂದು ಉಳಿದ ಸದಸ್ಯರು ಪ್ರಶ್ನಿಸಿದರು. ಅದಕ್ಕೆ ಪ ಪಂ ಸಿಬ್ಬಂದಿ ಉತ್ತರಿಸಲಿಲ್ಲ.
`ಪ ಪಂ ಸಿಬ್ಬಂದಿ ಅನಗತ್ಯ ಅಪವಾದ ಹಾಕಿದ್ದಾರೆ' ಎಂದು ದೂರಿದ ಸೋಮೇಶ್ವರ ನಾಯ್ಕ ಅವರು `ಸರ್ಕಾರಿ ಲೆಕ್ಕಾಚಾರದ ದಾಖಲೆಯನ್ನು ಒಬ್ಬ ಸದಸ್ಯರಿಗೆ ಮಾತ್ರ ಕೊಡಲು ಸಾಧ್ಯವಿಲ್ಲ' ಎಂದು ವಾದಿಸಿದರು. ಜೊತೆಗೆ `ತಾವು ಪೆನ್ ಡ್ರೈವ್ ಪಡೆದಿಲ್ಲ' ಎಂದು ಸಭೆಯಲ್ಲಿ ಸಾಭೀತು ಮಾಡಿದರು. `ಜಾಗ ಹರಾಜು ಹಾಕಿದ ವೇಳೆಯಲ್ಲಿನ ವಿಡಿಯೋ ಹಾಜರುಪಡಿಸಿ' ಎಂದು ಉಳಿದ ಸದಸ್ಯರು ಪ ಪಂ ಅಧಿಕಾರಿಗಳನ್ನು ಆಗ್ರಹಿಸಿದರು.
`ಜಾತ್ರೆಗೆ ಸಂಬoಧಿಸಿದ ಎಲ್ಲಾ ದಾಖಲೆಯನ್ನು ತನ್ನ ಗಮನಕ್ಕೆ ತನ್ನಿ' ಎಂದು ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ ತಾಕೀತು ಮಾಡಿದರು. ಈ ಹಿಂದಿನ ಸಭೆಗಳಂತೆ ಈ ಸಭೆ ಸಹ ಜಾತ್ರೆ ಲೆಕ್ಕಾಚಾರದ ಗಲಾಟೆ ಹಾಗೂ ಮೀನು ಮಾರುಕಟ್ಟೆ ವಿಷಯದೊಂದಿಗೆ ಮುಕ್ತಾಯವಾಯಿತು. ಹಿಂದಿನ ಸಭೆಯ ಠರಾವುಗಳಲ್ಲಿ ಸದಸ್ಯರ ಮಾತುಗಳನ್ನು ತಿರುಚಿ ಬರೆದ ಬಗ್ಗೆಯೂ ಕೆಲವರು ಆಕ್ಷೇಪಿಸಿದರು.