
ಶ್ರೀಗುರು ನಿತ್ಯಾನಂದ ಆಶ್ರಮದ ಜಾತ್ರಾ ಮಹೋತ್ಸವ
News Details
ಹಳಿಯಾಳ ಸಿದ್ದಾರೂಢ ಪರಂಪರೆಯ ಮಠವಾಗಿರುವ ಹಳಿಯಾಳ ತಾಲೂಕಿನ ಕೆ.ಕೆ. ಹಳ್ಳಿಯ ಶ್ರೀಗುರು ನಿತ್ಯಾನಂದ ಆಶ್ರಮದ ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ಧಾರೂಢ ಸ್ವಾಮಿ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಸಾವಿರಾರು ಭಕ್ತರು ರಥವನ್ನು ಎಳೆಯುವ ಮೂಲಕ ಸೋಮವಾರ ವಿಜೃಂಭಣೆಯಿಂದ ರಥೋತ್ಸವ ಜರುಗಿತು. ಪ್ರತಿವರ್ಷದಂತೆ ಶಿವರಾತ್ರಿಯ ನಂತರ ಈ ಜಾತ್ರಾ ಮಹೋತ್ಸವದ ಅಂಗವಾಗಿ ಕೆ.ಕೆ.ಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಓಂ ನಮಃ ಶಿವಾಯ , ಹರ ಹರ ಮಹಾದೇವ ಎಂಬ ಭಕ್ತರ ಉದ್ಗಾರದ ಘೋಷಣೆಗಳೊಂದಿಗೆ ರಥವನ್ನು ಎಳೆಯುವುದು ನಡೆದು ಬಂದ ಆಚರಣೆಯಾಗಿದೆ. ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಸಿದ್ಧಾರೂಢ ಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲುಮುಟ್ಟಿತು. ದೇಗುಲದಿಂದ ಮುಖ್ಯದ್ವಾರದವರೆಗೆ ರಥ ಎಳೆದು, ದೇವಸ್ಥಾನಕ್ಕೆ ವಾಪಸ್ಸಾಗುವವರೆಗೆ ಭಕ್ತರು ಸಂಭ್ರಮದಿಂದ ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಸಿದ್ದಾರೂಢ ಶ್ರೀಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಪೂಜೆ, ಅರ್ಚನೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಡೊಳ್ಳು, ಭಜನೆ, ಸಿದ್ಧಾರೂಢರ ಕುರಿತ ಹಾಡುಗಳು ಮೆರುಗು ನೀಡಿದವು. ವಿವಿಧ ಸಂಘ- ಸಂಸ್ಥೆಗಳು, ಭಕ್ತರಿಗೆ ಪ್ರಸಾದ, ತಂಪುಪಾನೀಯ ಹಂಚಿದವು. ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.