
ಗೋಕರ್ಣ ಮೇಲಿನಕೇರಿಯಲ್ಲಿ 20 ವರ್ಷಗಳ ನಂತರ ಪೊಲೀಸ್ಮಿಕ ಕೇಂದ್ರ ಪುನರಾರಂಭ
News Details
ಗೋಕರ್ಣದ ಮೇಲಿನಕೇರಿಯಲ್ಲಿ 20 ವರ್ಷಗಳ ಹಿಂದೆ ಬಂದ್ ಆಗಿದ್ದ `ಪೊಲೀಸ್ ಮಾಹಿತಿ ಕೇಂದ್ರ' ಇದೀಗ ಮತ್ತೆ ಶುರುವಾಗಲಿದೆ. ಈ ಕೇಂದ್ರ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ-ಸoವಹನಕ್ಕೆ ಸಹಾಯವಾಗುವ ನಿರೀಕ್ಷೆಯಿದೆ.
ಪ್ರವಾಸಿ ತಾಣಗಳ ಮಾಹಿತಿ, ಸುರಕ್ಷತಾ ವಿಧಾನ, ಚಾರಣ ಮಾರ್ಗ, ಪುಣ್ಯಕ್ಷೇತ್ರದ ಸ್ವಚ್ಛತೆಯ ಅರಿವು ಸೇರಿ ವಿವಿಧ ಮಾಹಿತಿಗಳನ್ನು ಇಲ್ಲಿ ನೀಡಲಾಗುತ್ತದೆ. ಪ್ರವಾಸಿಗರ ಸುರಕ್ಷತೆಗೆ ಒತ್ತು ನೀಡುವುದರ ಜೊತೆ ಅಕ್ರಮ ಚಟುವಟಿಕೆಗಳನ್ನು ಮಟ್ಟಹಾಕುವುದಕ್ಕಾಗಿ ಈ ಮಾಹಿತಿ ಕೇಂದ್ರ ತೆರೆಯಲಾಗಿದೆ. ಸಿಪಿಐ ಶ್ರೀಧರ್ ಅವರು ಉತ್ಸಾಹದಿಂದ ಈ ಕೇಂದ್ರ ಶುರು ಮಾಡಿದ್ದು, ಪಿಎಸ್‌ಐ ಖಾದರ ಬಾಷಾ, ಶಶಿಧರ ಮತ್ತು ಸಿಬ್ಬಂದಿ ಜನ ಜಾಗೃತಿಗಾಗಿ ಇಲ್ಲಿ ಕೆಲಸ ಮಾಡಲು ಸಜ್ಜಾಗಿದ್ದಾರೆ.
ಕಳೆದ ಎರಡು ತಿಂಗಳಿನಿAದ ಹಳೆಯ ಕಟ್ಟಡ ದುರಸ್ತಿಗೊಳಿಸುವ ಕೆಲಸ ನಡೆಯುತ್ತಿತ್ತು. ಇದೀಗ ಹೊಸದಾಗಿ ಮೇಲ್ಚಾವಣಿ ಮಾಡಲಾಗಿದೆ. ಮಾಹಿತಿ ಕೇಂದ್ರದ ಸುತ್ತಲು 28ಕ್ಕೂ ಅಧಿಕ ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪೊಲೀಸ್ ಠಾಣೆಯಿಂದ ಕ್ಯಾಮರಾ ನಿಯಂತ್ರಣಕ್ಕೆ ಒಳಪಡುತ್ತಿದೆ. ಇದರೊಂದಿಗೆ ಮುಖ್ಯ ಕಡಲ ತೀರ, ಗಂಜೀಗದ್ದೆಯ ಬಸ್ ನಿಲ್ದಾಣದ ಬಳಿ ಪೊಲೀಸ್ ಚೌಕಿ ನಿರ್ಮಿಸಲಾಗಿದೆ.
ಏಕಮುಖ ಸಂಚಾರ ನಿಯಮ ಪಾಲನೆಯೊಂದಿಗೆ ವಾಹನ ದಟ್ಟಣೆ ತಡೆಯಲು ಈ ಕೇಂದ್ರದ ಮೂಲಕ ಪ್ರಯತ್ನ ನಡೆದಿದೆ. `ಪೊಲೀಸ್ ಮಾಹಿತಿ ಕೇಂದ್ರ ತೆರೆದಿರುವುದು ಸಂತಸ. ಈ ಕೇಂದ್ರಗಳು ಜನರಿಗೆ ಉಪದ್ರವ ನೀಡುವ ಬದಲು ಜನಸ್ನೇಹಿಯಾಗಿ ವರ್ತಿಸಬೇಕು' ಎಂದು ಅನೇಕರು ತಮ್ಮ ಹಳೆಯ ಅನುಭವಗಳೊಂದಿಗೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಬುಧವಾರ ಬೆಳಗ್ಗೆ 10 ಗಂಟೆಗೆ ಈ ಕೇಂದ್ರದ ಉದ್ಘಾಟನೆ ನಡೆಯಲಿದ್ದು, ಹಲವು ಅಧಿಕಾರಿ-ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.