
ಕಾರು ಖರೀದಿ ವ್ಯಂಗ್ಯ: ಸಂಜಯ್ ಮೇಲೆ ಟೀಕೆ, ಹೊಡೆದಾಟ
News Details
ಸ್ವಂತ ಕಾರು ಖರೀದಿಸಲು ಸಾಧ್ಯವಾಗದ ಕಾರಣ ಸಂಜಯ ಹೆಗಡೆಕರ್ ಅವರಿಗೆ ಅಕ್ಕಪಕ್ಕದ ಮನೆಯವರು ವ್ಯಂಗ್ಯವಾಡುತ್ತಿದ್ದು, ಇದೇ ವಿಷಯ ಹೊಡೆದಾಟಕ್ಕೆ ಕಾರಣವಾಗಿದೆ.
ಕುಮಟಾದ ಹೆಗಡೆಯ ಜನಮಕ್ಕಿಯಲ್ಲಿ ಸಂಜಯ ಹೆಗಡೆಕರ್ ವಾಸವಾಗಿದ್ದಾರೆ. ಅವರ ಪತ್ನಿ ಸುಧಾ ಹೆಗಡೆಕರ್ ಬಿಸಿಯೂಟ ತಯಾರಿಸಿ ಬದುಕು ಕಟ್ಟಿಕೊಂಡಿದ್ದಾರೆ. ಪಕ್ಕದ ಮನೆಯ ನಾಗರಾಜ ನಾಯ್ಕ ಅವರು ಝರಾಕ್ಸ ಅಂಗಡಿ ನಡೆಸುತ್ತಾರೆ. `ಸಂಜಯ ಹೆಗಡೆಕರ್ ಅವರಲ್ಲಿ ಸ್ವಂತದೊoದು ಕಾರಿಲ್ಲ' ಎಂಬುದು ನಾಗರಾಜ ನಾಯ್ಕ ಅವರ ಕೊರಗು!
ಇದೇ ವಿಷಯವಾಗಿ ನಾಗರಾಜ ನಾಯ್ಕ ಅವರು ಸಂಜಯ ಹೆಗಡೆಕರ್ ಅವರಿಗೆ ಪದೇ ಪದೇ ಹಿಯಾಳಿಸುತ್ತಾರೆ. `ಸ್ವಂತ ಕಾರು ಖರೀದಿಸಲು ಯೋಗ್ಯತೆ ಇಲ್ಲ. ಬೇರೆಯವರ ಕಾರು ಓಡಿಸುತ್ತೀಯಾ?' ಎಂದು ಸಿಕ್ಕಾಗಲೆಲ್ಲ ವ್ಯಂಗ್ಯವಾಗಿ ಮಾತನಾಡುತ್ತಾರೆ. ಅದರಂತೆ ಏಪ್ರಿಲ್ 9ರಂದು ಸಹ ಸಂಜಯ ಹೆಗಡೆಕರ್ ಅವರು ಬೇರೆಯವರ ಕಾರು ತೆಗೆದುಕೊಂಡು ಹೋಗುವಾಗ ನಾಗರಾಜ ನಾಯ್ಕ ಎದುರಾದರು. `ಸ್ವಂತ ಕಾರಿಲ್ಲ' ಎಂದು ಮತ್ತೆ ವ್ಯಂಗ್ಯವಾಡಿದರು. ಇದೇ ವಿಷಯವಾಗಿ ಸಣ್ಣ ಪ್ರಮಾಣದಲ್ಲಿ ಜಗಳವೂ ನಡೆಯಿತು.
ಏಪ್ರಿಲ್ 10ರಂದು ಸಂಜಯ ಅವರ ಪತ್ನಿ ಸುಧಾ ಹೆಗಡೆಕರ್ ಅವರು ನಾಗರಾಜ ನಾಯ್ಕ ಅವರಿಗೆ ಎದುರಾದರು. `ನನ್ನ ಪತಿಗೆ ಏಕೆ ಹಿಯಾಳಿಸುವುದು?' ಎಂದು ಸುಧಾ ಹೆಗಡೆಕರ್ ಪ್ರಶ್ನಿಸಿದರು. ಇದರಿಂದ ಸಿಟ್ಟಾದ ನಾಗರಾಜ ನಾಯ್ಕರು ಕೆಟ್ಟದಾಗಿ ಬಯ್ಯಲು ಶುರು ಮಾಡಿದರು. ಜೊತೆಗೆ ಸುಧಾ ಅವರ ತಲೆಕೂದಲು ಹಿಡಿದು ಎಳೆದರು. ಈ ಬೊಬ್ಬೆ ಕೇಳಿ ಅಲ್ಲಿ ಅದೇ ಊರಿನ ನಿವೃತ್ತ ನೌಕರ ಸುಬ್ರಾಯ ನಾಯ್ಕ ಬಂದರು. ಅವರು ಸಹ ಸುಧಾ ಹೆಗಡೆಕರ್ ಅವರಿಗೆ ಬಡಿಗೆಯಿಂದ ಬಾರಿಸಿದರು.
ಇದನ್ನು ಸಹಿಸಲಾಗದ ಸುಧಾ ಹೆಗಡೆಕರ್ ಅವರು ತಮಗಾದ ಅವಮಾನ ಹಾಗೂ ನೋವಿನ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ಕುಮಟಾ ಪೊಲೀಸ್ ಠಾಣೆಯಲ್ಲಿ ನಾಗರಾಜ ನಾಯ್ಕ ಹಾಗೂ ಸುಬ್ರಾಯ ನಾಯ್ಕರ ವಿರುದ್ಧ ದೂರು ನೀಡಿ, ಪ್ರಕರಣ ದಾಖಲಿಸಿದರು. ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.