
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ: ಬಿ ವೈ ವಿಜಯೇಂದ್ರ ವಾಗ್ದಾಳಿ
News Details
ಚುನಾವಣಾ ಪೂರ್ವದಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಭ್ರಷ್ಟಾಚಾರದಲ್ಲಿ ತೊಡಗಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ದೂರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಿಲು ಶುಕ್ರವಾರ ಯಲ್ಲಾಪುರಕ್ಕೆ ಬಂದಿರುವ ಅವರು ಗ್ರಾಮದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾಧ್ಯಮದವರ ಜೊತೆ ಮಾತನಾಡಿದರು. `ಹಾಲು ಹಾಗೂ ನೀರಿನ ಬೆಲೆಯನ್ನು ಸರ್ಕಾರ ಏರಿಕೆ ಮಾಡಿದೆ. ಕಸದ ಮೇಲೆ ಸಹ ತೆರಿಗೆ ಹಾಕುತ್ತಿದೆ. ನಿರಂತರ ಬೆಲೆ ಏರಿಕೆಯಿಂದ ಜನ ಬೀದಿಗೆ ಇಳಿದಿದ್ದಾರೆ' ಎಂದು ಅವರು ದೂರಿದರು.
`ಕಾಂಗ್ರೆಸ್ ಸರ್ಕಾರ ಹಿಂದುಗಳಿಗೆ ಅವಮಾನ ಮಾಡುತ್ತಿದೆ. ಪರಿಶಿಷ್ಟ ಸಮುದಾಯಗಳಿಗೆ ಅನ್ಯಾಯ ಮಾಡಿದೆ. ಭ್ರಷ್ಟ ಹಾಗೂ ಜನ ವಿರೋಧಿ ಸರ್ಕಾರದ ಬಣ್ಣ ಬಯಲು ಮಾಡುವುದಕ್ಕಾಗಿ ಬಿಜೆಪಿ ಜಾಗೃತಿ ಜಾಥಾ ಆಯೋಜಿಸಿದೆ. ಎಲ್ಲಾ ಜಿಲ್ಲೆಯಲ್ಲಿಯೂ ಇದಕ್ಕೆ ವ್ಯಾಪಕ ಸ್ಪಂದನೆ ಸಿಕ್ಕಿದೆ' ಎಂದು ವಿವರಿಸಿದರು.
`ರಾಜ್ಯಬಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರ ಆಕ್ರೋಶ ತಲುಪಿದೆ. ಇದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸುವುದಾಗಿ ಕಾಂಗ್ರೆಸ್ ಹೇಳಿಕೆ ನೀಡಿದೆ. ಮುಖ್ಯಮಂತ್ರಿ ಖುರ್ಚಿ ಅಲ್ಲಾಡುವಾಗ ಸಿದ್ದರಾಮಯ್ಯ ಅವರಿಗೆ ಜಾತಿ ಗಣತಿ ನೆನಪಾಗುತ್ತದೆ. ಜಾತಿ ಗಣತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಸಿದ್ದರಾಮ್ಯಯ್ಯ ಅವರಿಗೆ ನೊಂದವರಿಗೆ ನ್ಯಾಯ ಕೊಡುವ ಕಳಕಳಿಯಿಲ್ಲ' ಎಂದು ಆರೋಪಿಸಿದರು.
`ಭ್ರಷ್ಟಾಚಾರ ವಿಷಯದಲ್ಲಿ ರಾಜ್ಯ ದೇಶದಲ್ಲಿ ಮೊದಲ ಸ್ಥಾನ ಪಡೆದಿದೆ. ಸರ್ಕಾರದ ಆರ್ಥಿಕ ಸಲಹೆಗಾರರೇ ಈ ಬಗ್ಗೆ ಹೇಳಿಕೊಂಡಿದ್ದು, ಗುತ್ತಿಗೆದಾರರು ಸಹ ಲಂಚದ ಆರೋಪ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗೆ ಹಣ ಕ್ರೂಢೀಕರಣ ಸಾಧ್ಯವಾಗುತ್ತಿಲ್ಲ. ಆರ್ಥಿಕ ಚಟುವಟಿಕೆಗಳು ಕುಸಿತವಾಗಿದೆ' ಎಂದು ಹೇಳಿದರು. `ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡಿದ್ದ ಶೇ 40ರ ಕಮಿಶನ್ ಆರೋಪ ರಾಜಕೀಯಪ್ರೇರಿತವಾಗಿತ್ತು. ಚುನಾಚವಣೆ ಹೊಸ್ತಿಲಿನಲ್ಲಿರುವಾಗ ಕಾಂಗ್ರೆಸ್ ಆರೋಪದ ಮೂಲಕ ಅಪಪ್ರಚಾರ ನಡೆಸಿತು. ಇದೀಗ ಸತ್ಯ ಎಲ್ಲರಿಗೂ ಗೊತ್ತಾಗಿದೆ' ಎಂದವರು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಷಯದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು `ಈ ಚರ್ಚೆ ನನ್ನ ಕಿವಿಗೆ ಬಿದ್ದಿಲ್ಲ' ಎಂದು ಉತ್ತರಿಸಿದರು.